	ಜಯದ್ರಥ 		
-	ಮಹಾಭಾರತದ ಪ್ರಕಾರ, ಸಿಂಧುದೇಶದ ಅರಸ ವೃದ್ಧ ಕ್ಷತ್ರನ ಮಗ, ಧೃತರಾಷ್ಟ್ರನ ಮಗಳಾದ ದುಶ್ಯಲೆಯ ಪತಿ. ಇವನನ್ನು ಸೈಂಧವ ಎಂದೂ ಸಂಬೋಧಿಸಲಾಗಿದೆ. ಸಾಳ್ವರಾಜಪುತ್ರಿಯ ಸ್ವಯಂವರಕ್ಕೆ ಹೊರಟ ಈತ ಕಾಮ್ಯಕ ವನಪ್ರದೇಶಕ್ಕೆ ಬಂದು ಅಲ್ಲಿ ಆಶ್ರಮವೊಂದರಲ್ಲಿ ವಾಸಮಾಡುತ್ತಿದ್ದ ಪಾಂಡವರ ಪತ್ನಿ ದ್ರೌಪದಿಯನ್ನು ಕಂಡು ಮೋಹಗೊಂಡು ಅವಳನ್ನು ಬಲಾತ್ಕಾರದಿಂದ ರಥದಲ್ಲಿ ಒಯ್ಯುತ್ತಾನೆ. ಆಶ್ರಮಕ್ಕೆ ಹಿಂತಿರುಗಿದ ಪಾಂಡವರಿಗೆ ಈ ಸುದ್ದಿ ತಿಳಿಯುತ್ತದೆ, ಭೀಮ ಇವನನ್ನು ಸೋಲಿಸಿ ದ್ರೌಪದಿಯನ್ನು ಹಿಂತಿರುಗಿಸುತ್ತಾನೆ. ದುಶ್ಯಲೆ ಹಾಗೂ ಧೃತರಾಷ್ಟ್ರ ಗಾಂಧಾರಿಯರ ಹಿತದೃಷ್ಟಿಯಿಂದ ಇವನನ್ನು ಸಂಹರಿಸಬಾರದೆಂದು ಅರ್ಜುನಾದಿಗಳು ಭೀಮನನ್ನು ಒತ್ತಾಯಪಡಿಸುತ್ತಾರಾಗಿ ಭೀಮ ಇವನ ಜೀವಕ್ಕೆ ಹಾನಿಮಾಡದೆ ಸಾಕಷ್ಟು ಅವಮಾನಕ್ಕೆ ಗುರಿಮಾಡಿ ಬಿಟ್ಟುಕೊಡುತ್ತಾನೆ. ಸ್ವಯಂವರಕ್ಕೆಂದು ಹೊರಟಿದ್ದ ಜಯದ್ರಥ ಪ್ರಯಾಣವನ್ನು ಮುಂದುವರಿಸದೆ ತನ್ನ ಪಟ್ಟಣಕ್ಕೆ ಹಿಂತಿರುಗಿ ಬಂದು, ಗಂಗಾ ದ್ವಾರದಲ್ಲಿ ಶಿವನನ್ನು ಕುರಿತು ತಪಸ್ಸುಮಾಡಿ, ಪ್ರತ್ಯಕ್ಷನಾದ ಶಿವನಿಂದ ಅರ್ಜುನನ ಹೊರತಾಗಿ ಮಿಕ್ಕ ನಾಲ್ವರು ಪಾಂಡವರನ್ನು ಒಂದು ಬಾರಿ ಮಾತ್ರ ಗೆಲ್ಲುವ ವರವನ್ನು ಪಡೆದುಕೊಳ್ಳುತ್ತಾನೆ. ಭಾರತ ಯುದ್ಧದ ಹದಿಮೂರನೆಯದಿಂದ ಚಕ್ರವ್ಯೂಹವನ್ನು ಛೇದಿಸಿ ಒಳಹೊಕ್ಕ ಅಭಿಮನ್ಯುವಿನ ಕೊಲೆಗೆ ಜಯದ್ರಥ ಮುಖ್ಯ ಕಾರಣನಾಗುತ್ತಾನೆ. ಅದೇ ಕಾರಣದಿಂದಾಗಿ, ಕುಪಿತನಾದ ಅರ್ಜುನನ ಬಾಣಕ್ಕೆ ಗುರಿಯಾಗಿ ಅಸುನೀಗುತ್ತಾನೆ.										(ಬಿ.ಕೆ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ